ಮೈಸೂರಿನ ಟಿ.ನರಸೀಪುರದ ರೇಷ್ಮೆ ಸೀರೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ. ಕಾರ್ಖಾನೆ ಅದೇ ಜಾಗದಲ್ಲಿ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ, ವಿಧಾನಸಭೆಯಲ್ಲಿ ತನ್ನ ತೀರ್ಮಾನ ಪ್ರಕಟಿಸಿದೆ. ರೇಷ್ಮೆ ಸಚಿವ ಕೆ.ವೆಂಕಟೇಶ್ ಕಾರ್ಖಾನೆ ಮುಚ್ಚಲ್ಲ ಎಂದು ಹೇಳಿದ್ದಾರೆ. ವಿರೋಧ ಪಕ್ಷ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿರುವ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ. ಕಾರ್ಖಾನೆ ಯಥಾಪ್ರಕಾರ ಮುಂದುವರಿಯಲಿದೆ ಎಂದು ರೇಷ್ಮೆ ಸಚಿವ ಕೆ.ವೆಂಕಟೇಶ್ ವಿಧಾನಸಭೆಗೆ ಉತ್ತರ ನೀಡಿದ್ದಾರೆ. ರೇಷ್ಮೆ ಕಾರ್ಖಾನೆ ಜಾಗದಲ್ಲಿ ಸ್ಟೇಡಿಯಂ ಕಟ್ಟುವುದಿಲ್ಲ ಎಂದು ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ರೇಷ್ಮೆ ಕಾರ್ಖಾನೆ ಜಾಗದಲ್ಲಿ ಸ್ಟೇಡಿಯಂ ನಿರ್ಮಿಸಲು ಕೂಡ ಜಾಗ ಇದೆ ಎಂದು ಯಾರೋ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರು. ಆ ಜಾಗವನ್ನು ಸ್ಟೇಡಿಯಂ ನಿರ್ಮಾಣದಿಂದ ಕೈ ಬಿಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.
ರಾಜ್ಯ ಸರ್ಕಾರದ ತೀರ್ಮಾನವನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸ್ವಾಗತಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ರೇಷ್ಮೆ ಸೀರೆಗಳ ಮಾರಾಟ, ಉದ್ದನೆಯ ಕ್ಯೂ ಸೇರಿದಂತೆ ರೇಷ್ಮೆ ಇಲಾಖೆಯ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಸರ್ಕಾರ ಟಿ.ನರಸೀಪುರದ ರೇಷ್ಮೆ ಕಾರ್ಖಾನೆ ಮುಚ್ಚಲು ಹೊರಟಿದೆ ಎಂದು ವಿಷಯ ಪ್ರಸ್ತಾಪಿಸಿದ್ದರು.
ಇನ್ನೂ ಕರ್ನಾಟಕ ಸಿಲ್ಕ್ ಇಂಡಸ್ಟ್ರೀ ಕಾರ್ಪೋರೇಷನ್ ಉತ್ಪಾದಿಸುವ ಸೀರೆಗಳ ಮಾರಾಟ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ಮೈಸೂರಿನ ಬಿಜೆಪಿ ಶಾಸಕ ಶ್ರೀವತ್ಸ ಸರ್ಕಾರವನ್ನು ಪ್ರಶ್ನಿಸಿದ್ದರು.
ಇದಕ್ಕೆ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಉತ್ತರ ನೀಡಿದ್ದರು. ಮೈಸೂರು ರೇಷ್ಮೆ ಸೀರೆಗಳಿಗೆ ಡಿಮ್ಯಾಂಡ್ ಇದೆ. ದಿನಕ್ಕೆ 300-400 ಸೀರೆಗಳ ಉತ್ಪಾದನೆಯಾಗುತ್ತಿದೆ. ಎಚ್ಚರಿಕೆಯಿಂದ ಗುಣಮಟ್ಟದ ಸೀರೆಗಳ ತಯಾರು ಮಾಡಲಾಗುತ್ತಿದೆ. ಸೀರೆಗಳ ಉತ್ಪಾದನೆ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತಿದೆ. ಸೀರೆಗೆ ಬೇರೆ ರಾಜ್ಯಗಳಿಂದಲೂ ತುಂಬಾ ಬೇಡಿಕೆ ಇದೆ. ಜನ ಸೀರೆ ಖರೀದಿಗೆ ಕ್ಯೂ ನಿಲ್ಲುತ್ತಾರೆ ಅಂತಾ ಶ್ರೀವತ್ಸ ಹೇಳುತ್ತಾರೆ. ಸೆಕೆಂಡ್ಸ್ ಸೇಲ್ ಅಂತ ಮಾರಾಟ ಮಾಡ್ತಾರೆ, ಡಿಸ್ಕೌಂಟ್ ಇರುತ್ತೆ. ಆಗ ಜನ ಕ್ಯೂನಲ್ಲಿ ನಿಲ್ಲುತ್ತಾರೆ. ರೇಷ್ಮೆ ಸೀರೆಗಳನ್ನ ಆನ್‌ಲೈನ್ ಬದಲಿಗೆ ಸ್ಥಳೀಯವಾಗಿ ಮಾರಾಟ ಮಾಡುವ ಚಿಂತನೆ ಇದೆ ಎಂದು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
